ಭಾರತೀಯ ಪರಂಪರೆಯಲ್ಲಿನ ಕಾಲದ ಲೆಕ್ಕಾಚಾರವೇ ಹಾಗೆ ಬೇರೆಲ್ಲಾ ಪರಂಪರೆಗಳಿಗಿಂತ ತೀರಾ ಭಿನ್ನವಾದ, ವಿಶಿಷ್ಟ ರೀತಿಯಲ್ಲಿದೆ. ಸಂವತ್ಸರಗಳನ್ನು ಹೆಸರಿಸುವುದು, ಕಾಲವನ್ನು ವಿಘಟಿಸುವುದೂ ಎಲ್ಲವೂ ದೈವದ ಸುತ್ತಲೇ ಕೇಂದ್ರಿತವಾಗಿರುತ್ತದೆ. ಅಂತೆಯೇ ಕಾಲ ನಿರ್ಣಯವೂ ಸಹ ದೈವದ ಸುತ್ತ ಕೇಂದ್ರಿತವಾಗಿದೆ. ಆದರೆ ಮನುಷ್ಯನ ಕಾಲಕ್ಕೂ, ದೇವತೆಗಳ ಕಾಲಕ್ಕೂ ವ್ಯತ್ಯಾಸವಿದ್ದು, ಬ್ರಹ್ಮನ ಆಯುಷ್ಯದೊಂದಿಗೆ ಹೋಲಿಸಿ ದೇವತೆಗಳಿಗೆ ಅನ್ವಯಿಸುವ ಕಾಲವನ್ನು ಗುರುತಿಸುತ್ತೇವೆ. ಸಾಮಾನ್ಯವಾಗಿ ಮನುಷ್ಯನ ಆಯುಷ್ಯವನ್ನು 100-120 ವತ್ಸರಗಳೆಂದು ಹೇಳಲಾಗಿದೆ. ಅಂತೆಯೇ ಈ ಚತುರ್ಮುಖನ ಕಾಲವೂ ನೂರೆಂದು ಹೇಳಲಾಗಿದೆ. ಆದರೆ ಚತುರ್ಮುಖನ ನೂರು ವರ್ಷಗಳ ಲೆಕ್ಕಾಚಾರವೇ ಬಹು ದೊಡ್ಡದು. ಇಂತಹ ವರ್ಷಗಳು ನಾಲಕ್ಕು ಲಕ್ಷ ಮೂವತ್ತೆರಡು ಸಾವಿರವಾದರೆ ಕಲಿಯುಗ ಮುಗಿಯುತ್ತದೆ! ಅಂತೆಯೇ ದ್ವಾಪರಯುಗಕ್ಕೆ 8,64,000 ವರ್ಷಗಳು. ನಂತರ ತ್ರೇತಾಯುಗದ ಆಯುರ್ಮಾನ 12,96,000 ವರ್ಷಗಳು. ಅನಂತರದ ಕೃತಯುಗಕ್ಕೆ 17,28,000 ವರ್ಷಗಳು. ಈ ನಾಲ್ಕು ಯುಗಗಳ ಒಟ್ಟು ಕಾಲಮಾನ 43,20,000 ವರ್ಷಗಳು. ಇಂತಹ 43,20,000 ವರ್ಷಗಳು ಮತ್ತೆ ಮತ್ತೆ 1000 ಬಂದರೆ ನಮ್ಮ ಬ್ರಹ್ಮನಿಗೆ ಒಂದು ದಿನ. ಇಂತಹ ದಿನಗಳು ಮೂವತ್ತಾದರೆ ತಿಂಗಳು, ಅಂತಹ ತಿಂಗಳುಗಳು ಹನ್ನೆರಡಾದರೆ ವರ್ಷ. ಇಂತಹ ವರ್ಷಗಳು ನೂರಾಗಬೇಕು ನಮ್ಮ ಈಗಿನ ಬ್ರಹ್ಮನ ಆಯುಷ್ಯ ಪೂರ್ಣಗೊಳ್ಳುವುದಕ್ಕೆ.